ದೇಶಭಕ್ತ ಸರ್ದಾರನ ಸಿಂಹದಂತ ಹೆಜ್ಜೆಯ ಗುರುತು.


ಭಗತ್ ಸಿಂಗ್
ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಎಂಬುವರಿಗೆ ಜನಿಸಿದ ಭಗತ್ ಸಿಂಗ್. ಜಲಿಯನ್ ವಾಲಾ ಬಾಗ್ ದುರಂತದಿಂದ ಪ್ರಭಾವಿತರಾಗಿ ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು.ಭಗತ್ ಸಿಂಗ್‌ನ ಹೆಸರೇ ರೋಮಾಂಚನ ಉಂಟುಮಾಡುವಂಥದ್ದು. ನಮ್ಮ ದೇಶದ ಇತಿಹಾಸದಲ್ಲಿ ಈತನ ಹೆಸರು ಚಿರಸ್ಥಾಯಿಯಾಗಿದೆ. ಭಾರತ ಸ್ವಾತಂತ್ರಯ ಸಂಗ್ರಾಮದ ಕ್ರಾಂತಿಕಾರಿ ಹಾಗೂ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದ ಭಗತ್ ಸಿಂಗ್ ಅವರು ಸೆಪ್ಟೆಂಬರ್ 28 1907ರಲ್ಲಿ ಪಂಜಾಬ್ ಲಾಯಲ್ ಪುರ ಜಿಲ್ಲೆಯ ಬಾಂಗಾ ಎಂಬಲ್ಲಿ ಜನಿಸಿದರು.

ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು. ಪಿಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್ಪಟ ಕ್ರಾಂತ್ರಿಯು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ ಎಂದು ಭಗತ್ ಸಿಂಗ್ ಗರ್ಜಿಸಿದ್ದರು.


'ಹಿಂದುಸ್ಥಾನ್ ಸಮಾಜವಾದಿ ಗಣತಂತ್ರ ಸಂಘಟನೆ'ಯನ್ನು ಸ್ಥಾಪಿಸಿ ಯುವಕರನ್ನು ಸಂಘಟಿಸಿ ಕ್ರಾಂತಿಕಾರಿ ಪಥದತ್ತ ಕೊಂಡೊಯ್ದ ಮಹಾನ್ ದೇಶಪ್ರೇಮಿ ಭಗತ್. ಜಾನ್ ಸ್ಯಾಂಡರ್‌ಸನ್ ಕೊಲೆ ಮೊಕದ್ದಮೆಯ ಅಪಾದಿತನಾಗಿ, ಕೇಂದ್ರ ಶಾಸನ ಸಭೆಯಲ್ಲಿ ಬಾಂಬು ಎಸೆದಿದ್ದಕ್ಕಾಗಿ ಅವನಿಗೆ ಮರಣದಂಡನೆ ವಿಧಿಸಲಾಯಿತು. ಲಾಹೋರ್ ಜೈಲಿನಲ್ಲಿ 1931 ಮಾರ್ಚ್ 24ರಂದು ಗಲ್ಲಿಗೇರಿಸುವ ದಿನಾಂಕವನ್ನೂ ನಿಗದಿಗೊಳಿಸಲಾಗಿತ್ತು. ಜೈಲಧಿಕಾರಿಯು ಭಗತ್ ಸಿಂಗ್‌ನ ಬಳಿ ಬಂದು ಇನ್ನು ಕೆಲವೇ ಸಮಯದಲ್ಲಿ ಆತನನ್ನು ಗಲ್ಲಿಗೇರಿಸಲಾಗುವುದೆಂದೂ ಅದಕ್ಕೆ ತಯಾರಾಗಬೇಕೆಂದೂ ತಿಳಿಸಿದಾಗ, ಆ ಕ್ರಾಂತಿಕಾರಿ ನಾಯಕ ಲೆನಿನ್ನನ ಜೀವನ ಚರಿತ್ರೆಯನ್ನು ಓದುತ್ತಿದ್ದ. 'ಸ್ವಲ್ಪ ನಿಧಾನ ಮಾಡು. ನಾನು ಈ ಪುಸ್ತಕ ಓದುತ್ತಿದ್ದೇನೆ. ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು ಸಂದರ್ಶಿಸುವ ಸಮಯವಿದು' ಎಂದುತ್ತರಿಸಿದ. ಇನ್ನೇನು ಗಲ್ಲಿಗೇರುವ ಸಮಯ. ಬ್ರಿಟಿಷ್ ಸರ್ಕಾರದ ವಿರುದ್ಧ ಮತ್ತು ಭಾರತದ ಸ್ವಾತಂತ್ರ್ಯ ಪರವಾದ ಘೋಷಣೆಗಳನ್ನು ಕೂಗುತ್ತಾ ನೇಣುಗಂಬದ ಬಳಿ ಬಂದ ಭಗತ್ಸಿಂಗ್ 'ನಾನು ಗತಿಸಿದ ಮೇಲೂ ನನ್ನ ಉಸಿರಿನಲ್ಲಿ ದೇಶದ ಪ್ರಾಣ ಇರುತ್ತದೆ, ನನ್ನ ಮಣ್ಣಿನಿಂದಲೂ ದೇಶದ ವಾಸನೆ ಬರುತ್ತದೆ' ಎಂಬರ್ಥದ ಗೀತೆಯನ್ನು ಗಟ್ಟಿಯಾದ ದನಿಯಲ್ಲಿ ಹಾಡುತ್ತಿದ್ದ. ಅವನ ಮುಖದ ಮೇಲೆ ಲವಲೇಶವೂ ದುಃಖದ ಛಾಯೆ ಇರಲಿಲ್ಲ.

ಆಗ ಲಾಹೋರ್ ಜೈಲಿನ ಮುಖ್ಯಾಧಿಕಾರಿಯಾಗಿದ್ದ, ಸಿಖ್ ಧರ್ಮದ ನಿಷ್ಠಾವಂತ ಅನುಯಾಯಿಯಾಗಿದ್ದ ಸರ್ದಾರ್ ಚತರ್‌ಸಿಂಗ್, ಭಗತ್ ಸಿಂಗ್‌ನ ಬಳಿ ಬಂದು 'ಮಗೂ, ನನ್ನನ್ನು ನಿನ್ನ ತಂದೆಯಂತೆ ಭಾವಿಸಿಕೋ. ನಿನ್ನ ಅಂತ್ಯ ಸಮೀಪಿಸುತ್ತಿರುವುದರಿಂದ ಗುರುವಾಣಿಯನ್ನು ಪಠಣ ಮಾಡುತ್ತಾ 'ವಾಹೇ ಗುರು' ಎಂದು ನಾಮೋಚ್ಛಾರ ಮಾಡು' ಎಂದು ವಿನಂತಿಸಿದ. ಅದನ್ನು ಕೇಳಿ ಭಗತ್ ಸಿಂಗ್ ಜೋರಾಗಿ ನಗುತ್ತಾ, 'ನಾನು ಹಾಗೆ ಮಾಡಿದರೆ, ಪುಕ್ಕಲನಾಗಿ ಸಾವನ್ನು ಎದುರಿಸಲಾಗದೇ ನನ್ನ ಮೊರೆ ಹೋಗುತ್ತಿದ್ದಾನೆ ಎಂದು ಭಗವಂತ ನನ್ನನ್ನು ಅಣುಕಿಸಿಯಾನು' ಎಂದುತ್ತರಿಸಿದ. ಅವನಿಗೆ ಧರ್ಮ ಶ್ರದ್ಧೆಯಿದ್ದರೂ ಸಾವು ಸಮೀಪಿಸಿದ ಸಮಯದಲ್ಲಿ ತಾನು ಅಧೀರನಾದೆ ಎಂದು ಯಾರೂ ಭಾವಿಸಬಾರದು ಎಂದು ಹಾಗೆ ಮಾಡಿದನು.
ಬ್ರಿಟಿಷರಿಗೆ ಭಗತ್ ಸಿಂಗ್‌ನ ಮೇಲೆ ಅದೇನು ಭಯವಿತ್ತೋ, ದ್ವೇಷವಿತ್ತೋ ಏನೋ, ಅವನ ಮೃತ ಶರೀರವನ್ನು ಅವನ ಸಂಬಂಧಿಕರಿಗೆ ನೀಡದೆ ರಾತ್ರೋರಾತ್ರಿ ಸಟ್ಲೆಜ್ ನದಿ ದಂಡೆಯಮೇಲೆ ಶವಸಂಸ್ಕಾರ ಮಾಡಿದರು. ಹೀಗೆ ಅಮರನಾದ ಭಗತ್‌ಸಿಂಗ್ ಭಾರತೀಯರ ಕಣ್ಮಣಿಯಾಗಿದ್ದಾನೆ. ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.