ಬುದ್ಧಿವಂತ ವ್ಯಾಪಾರಿ(ಪಾನಿಪೂರಿಯ ಕಥೆ) ಭಾಗ1


ಇದೊಂದು ಚಿಕ್ಕ ಕಥೆಯ ಹಾಗೆನಿಸಿದರೂ ಆತ ಹೇಳಿದ ಮಾತು ಸತ್ಯವಾಗುವ ಮಟ್ಟಿಗೆ  ಶೈಕ್ಷಣಿಕ ಮೌಲ್ಯ ಕುಸಿದಿದೆ.
ದೇಶದಲ್ಲೆಡೆ ತಾಂಡವವಾಡುತ್ತಿರುವ ನಿರುದ್ಯೋಗದ ಸಮಸ್ಯೆಗೆ ಮತ್ತು ವಿದ್ಯಾವಂತ ನಿರುದ್ಯೊಗಿಗಳಿಗೆ ಈ ಲೇಖನ ಅರ್ಪಣೆ.


 ಹೊರಗಡೆಗೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮತ್ತು ಚಳಿಗೆ ಸಂಜೆ ಹೊರಗೆ ಹೋಗಲು ಬೇಜಾರು(ಸ್ವಲ್ಪ ಆಲಸಿತನ) ಹಾಗೆಯೆ ಮನೆಯಲ್ಲಿ ಟಿವಿ ನೋಡ್ತಾ ಕೂತಾಗ ಇದ್ದಕ್ಕಿದ್ದಂತೆ ಪುಟ್ಟು ಓಡಿ ಬಂದ ಒಂದೆ ಸಮನೆ ಪಾಂಪುರಿ ಪಾಂಪುರಿ ಅಂತಿದ್ದ ಏನೆಂದು ವಿಚಾರಿಸಿದಾಗ ಹೊರಗಡೆ ತಳ್ಳುಗಾಡಿಯಲ್ಲಿದ್ದ ಪಾನಿಪುರಿ ಅಂಗಡಿ ತೋರಿಸಿದ.
ಅಕ್ಷರಶಃ ಮರೆತಂತಿದ್ದ ನನ್ನ ಶಾಲಾದಿನಗಳ ನೆಚ್ಚಿನ ಪಾನಿಪೂರಿ ಅಲ್ಲಿಂದಲೆ ಕೈ ಬೀಸಿ ಕರೆಯುತ್ತಿತ್ತು.
ಸರಿ ಇನ್ನೇನು ಕೊಡೆ ಹಿಡಿದುಕೊಂಡು ರಸ್ತೆಯ ಆ ಬದಿಯಲ್ಲಿ ಹರಸಾಹಸಪಟ್ಟು ದಾಟಿದೆ (ನಂ ಏರಿಯಾ ತಗ್ಗು ಗುಂಡಿಗಳು ಚಂದ್ರಗ್ರಹದ ಕುಳಿಗಳಂತೆ ಕಾಣುತ್ತವೆ) ಐವತ್ತು ರೂಪಾಯಿಗೆ ಪಾರ್ಸಲ್ ಕಟ್ಟಿಕೊಡಿ ಅಂತ ಕೇಳಿದೊಡನೆ ಅಂಗಡಿಯಾತ ಹೇಳಿದ "ಖಲಾಸ್ ಖತಂ ಸಬ್ ಕುಚ್ ಖಾಲಿ" ನಿರಾಸೆಯಿಂದ ಮತ್ತೆ ರಸ್ತೆ ದಾಟಿ ಬರುವಾಗ ದೂರದಿಂದಲೆ ನನ್ನ ಗಮನಿಸುತ್ತಿದ್ದ ಪುಟ್ಟನಿಗೆ ನನ್ನ ಖಾಲಿ ಕೈ ಸ್ವಲ್ಪ ಬೇಜಾರು ತಂದಿಟ್ಟಿತು.
ಖಾಲಿಯಾಯ್ತು ಪುಟ್ಟ ನಾಳೆ ಕೊಡಸ್ತಿನಿ ಅಂದಾಗ ಆತನ ಕಣ್ಣುಗಳಲ್ಲಿ ಏನೊ ಹೊಳಪು , ಮೆಲ್ಲನೆ ಜೇಬಿನಿಂದ ಸ್ಕೂಟಿ ರಿಮೋಟ್ ತೆಗೆದು ಗುಂಡಿ ಒತ್ತಿದ. ಅದು ಅಲ್ಲಿಂದಲೆ ರಿಂಗಣಿಸಿತು,ಮಳೆ ಸ್ವಲ್ಪ ಕಡಿಮೆಯಾಗಿತ್ತು, ಪುಟ್ಟುವಿಗೆ ನಿರಾಸೆಯಾಗಬಾರದೆಂದು (ನನಗೂ ಸಹ) ಗಾಡಿಯನ್ನು ತೆಗೆದುಕೊಂಡು ಮೆಲ್ಲನೆ ಬಸ್ಟಾಂಡ್ ಬದಿಯ ಅಂಗಡಿಯ ಹತ್ತಿರ ನೆಡೆದೆ.
ಪಾನಿಪೂರಿ ಅಂಗಡಿ ಮಳೆಯ ಕಾರಣ ಗಿರಾಕಿಗಳಿಲ್ಲದೆ ಸ್ವಲ್ಪ ಖಾಲಿ ಇತ್ತು .
ಆತನಿಗೆ ಪಾನಿಪೂರಿ ಕೇಳಿದಾಗ ಜೋರಾಗಿ ವಸಂತ ಅಂತ ಕೂಗಿದಾಗ ಒಬ್ಬ ಬಾಲಕ (ಸುಮಾರು ಹನ್ನೆರಡು ಹದಿಮೂರು ವಯಸ್ಸಿನ ಆಸುಪಾಸಿನ) ಓಡಿ ಬಂದು ತಟ್ಟೆಯನ್ನು ತೊಳೆಯತೊಡಗಿದ.
ನಾನು ಅವನ ರಟ್ಟೆ ಹಿಡಿದು ಗದುರುವ ರೀತಿಯಲ್ಲಿ "ಶಾಲೆ ಕಲೆಯುವ ವಯಸ್ಸಲ್ಲಿ ಕೆಲಸ ಮಾಡ್ತಿಯಾ ಇರು ಪೋಲಿಸರಿಗೆ ಹಿಡಿದುಕೊಡುತ್ತೆನೆ" ಅಂದಾಗ ಆತ ಪಾನಿಪೂರಿಯ ತಟ್ಟೆಯನ್ನು ಕೆಳಕ್ಕಿಟ್ಟು ಅಂಗಡಿಯಾತನನ್ನು ದಿಟ್ಟಿಸತೊಡಗಿದ.
ಅಂಗಡಿಯವನು ಆತ ತನ್ನ ಮಗನೆಂದು ಹೇಳಿದ ನಂತರ ನಾನು ಕೇಳಿದ್ದು ಎಷ್ಟನೆ ತರಗತಿ ಅಂತ, ಆತ ಹೀಳಿದ ನಾಲ್ಕನೆ ತರಗತಿ ಮುಗಿಸಿ ಈಗ ಶಾಲೆ ಬಿಟ್ಟು ನನ್ನ ಮತ್ತು ನನ್ನ ತಮ್ಮನ ಅಂಗಡಿಯಲ್ಲಿ ಸಹಾಯ ಮಾಡ್ತಾನೆ ಅಂದ.
ನಾನು ಸಹಜವಾಗಿ ಹೇಳುವಂತೆ 'ಶಾಲೆ ಕಲೆಸಿದರೆ ಆತನಿಗೆ ಉತ್ತಮ ಭವಿಷ್ಯವಿದೆ' ಅಂತ ಹೇಳಿದಾಗ ಆತನ ಒಂದು ಉತ್ತರ ನಮ್ಮ ಬಾಲ್ಯ ಸ್ನೇಹಿತ ಎಮ್ಮೆ ಪ್ರಕಾಶನ(ದೊಡ್ಡಹೈನುಗಾರಿಕೆಯ ಮಾಲಿಕ) ನೆನಪಾಯಿತು.
ಹೇಳಿದ ಮಾತು ಚಿಕ್ಕದು "ಶಾಲೆ ಕಲ್ತು ಯಾವ ಮಗಾ ಉದ್ಧಾರ ಆಗ್ಯಾನಂತ ಹೇಳ್ರಿ ಮೇಡಂ? ಅದು ನೂರಕ್ಕೆ ಒಂದಿಬ್ರು!!
ಅಂತ ಹೇಳಿದ.....


ಇದೇನು ಸುಹಾಸಿನಿ ವ್ಯಾಪಾರ ಸಂಬಧಿಸಿಧ ಮಾಹಿತಿ ಬದಲು ಕಥೆ ಕುಯ್ಯುತ್ತಾರೆ ಅನ್ಕೊಬೇಡಿ
ಅದು ಈಗ ಹೇಳುತ್ತೆನೆ.

ಮಳೆ ಜೋರಾದ ಕಾರಣ ಆತನೊಡನೆ ಅವನ ವೃತ್ತಿಯ ಬಗ್ಗೆ ಕೇಳತೊಡಗಿದೆ..
ಆತನ ಹೆಸರು ಕುಮಾರನಾಥ್ ಸಾಹೂ ದೂರದ ರಾಜಸ್ಥಾನದಿಂದ ಉದ್ಯೊಗವನ್ನರಸಿ ಹುಬ್ಬಳ್ಳಿಗೆ 2015ರಲ್ಲಿ ಆತನ ಚಿಕ್ಕಪ್ಪನ ಮನೆಗೆ ಬಂದಿದ್ದ.ಅಲ್ಲಿನ ಕಾಟಾ ಮಾರ್ಕೇಟ್'ಬಳಿಯಲ್ಲಿನ ಚಿಕ್ಕ ಗೂಡಂಗಡಿಯಲ್ಲಿ ಚಹಾ ಮಾರುವ ವೃತ್ತಿ ಆರಂಭಿಸಿ ಆರುತಿಂಗಳಲ್ಲಿ ಪಾನಿಪೂರಿ ತಯಾರಿಸುವ ಭಟ್ಟಿಯೊಂದರಲ್ಲಿ ಕೆಲಸ ಸೇರಿದ್ದ ಕಾರಣ ಆತನಿಗೆ ಪಾನಿಪೂರಿ ಅಂಗಡಿಯ ಯೊಚನೆ ಬಂದಿದ್ದೆ ತಡ ಎರಡು ಸಾವಿರ ರೂಪಾಯಿ ಒಟ್ಟುಗೂಡಿಸಿ ಒಂದು ಬುಟ್ಟಿ ಮಡಿಕೆ ಮತ್ತು ಸ್ಟಾಂಡ್ ಖರಿದಿಸಿ ರಸ್ತೆ ಬದಿಯಲ್ಲಿ ಕಾಲೇಜು ಗೇಟಿನ ಬಳಿ ಪಾನಿಪೂರಿ ಅಂಗಡಿ ಹಾಕಿ ಒಬ್ಬ ಚಿಕ್ಕ ಉದ್ಯಮಿಯಾದ.
ಅಲ್ಲಿಂದ ಸತತವಾಗಿ ದುಡಿದು ಈಗ ಎರಡು ಅಂಗಡಿಯ ಮಾಲಿಕನಾಗಿದ್ದಾನೆ.

ಆದರೆ ನಿಲ್ಲದ ಮಳೆಯ ಹಾಗೆ ನನ್ನ ಪ್ರಶ್ನೆ ಮುಗಿದಿರಲಿಲ್ಲ

ಮತ್ತೆ ಕೇಳಿದೆ ವ್ಯಾಪರದಲ್ಲಿ ಲಾಭ ಇದೆಯ ಅಥವ ಅಷ್ಟಕಷ್ಟೆ ಇರುತ್ತಾ ಅಂತ.
ಆತ ಹೆಚ್ಚಿಗೆ ಹೇಳದಿದ್ದರು ಚಿಕ್ಕದಾಗಿ ಹೇಳಿದ.

ದಿನಕ್ಕೆ ಸಾವಿರ ರೂಪಾಯಿ ಬಂಡವಾಳ.
ಕೆಲುವೊಮ್ಮೆ ಆರೇಳು ಸಾವಿರರೂಪಾಯಿ ವ್ಯಾಪಾರ
ಇಂತಹ ಮಳೆಗಾಲಕ್ಕೆ ಮಳೆಗಾಲಕ್ಕೆ ನಾಲ್ಕು ಸಾವಿರಕ್ಕೆ ಕಡಿಮೆ ಇಲ್ಲ.!!

ಹೇಳಿದ್ದೆ ತಡ ತಲೆಯಲ್ಲಿ ಕ್ಯಾಲ್ಕುಲೇಟರ್ ಓಡತೊಡಗಿತು.
4000ಲಾಭ - 1000ಬಂಡವಾಳ = 3000
ಅಂಗಡಿ ದಿನದ ಜಾಗ ಬಾಡಿಗೆ ಚಿಕ್ಕಪುಟ್ಟ ಖರ್ಚು 500
3000-500 = 2500
''2500×26 = 65,000 ಅದು ಎರಡು ಅಂಗಡಿಯಿದೆ ಅಂತ ಹೇಳಿದ್ದ...
ಅಬ್ಬಾ!!
ಒಂದೆ ಕ್ಷಣಕ್ಕೆ ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ,ವೈಟ್ ಫಿಲ್ಡ್ ನಂತಹ ಕೈಗಾರಿಕಾವಲಯದಲ್ಲಿ ಕೆಲಸಕ್ಕಾಗಿ ಅಲೆಯುವ ವಿದ್ಯಾವಂತರ ಚಿತ್ರ ಕಣ್ಣಿನ ಮುಂದೆ ತೇಲುತ್ತಿತ್ತು.!

ಆತನಿಗೆ ಮತ್ತೆ ಹೇಳಿದೆ ' ಹಾಗಿದ್ದಲ್ಲಿ ನಿನ್ನ ಮಗನನ್ನು ದೊಡ್ಡ ಶಾಲೆಯಲ್ಲಿ ಕಲಿಯಲು ಹಾಕಬಹುದೆಂದು'

ಆತನ ಮಾತು ಕೇಳಿದ ನಂತರ ನನ್ನ ಮೆದುಳುಸಹ ಯೋಚಿಸುವ ದಿಕ್ಕನ್ನೆ ಬದಲಾಯಿಸಿತು!!!!

ಆತ ಹೇಳಿದ,
"ನಿಮ್ಮ ವಿದ್ಯೆ ಡಿಗ್ರಿ ಸರ್ಟಿಫಿಕೇಟು ನಿಮಗೆ ಮಾತ್ರ ಅದು ನಿಮ್ಮ ಮಕ್ಕಳಿಗೆ ಬರುವುದಿಲ್ಲ,
ಆದರೆ ಸ್ವಂತ ವ್ಯಾಪಾರ ನಾಲ್ಕು ತಲೆಮಾರಿನವರೆಗೆ

ಆತ ಮಾತಿಗೆ ಫುಲ್'ಸ್ಟಾಪ್ ಇಟ್ಟಂತೆ ಮಳೆಯು ನಿಂತು ಹೋಯ್ತು..

ನೇರವಾಗಿ ಮನೆಗೆ ಬಂದೆ.
ಇದೆ ಯೋಚನೆಯಲ್ಲಿ ಬರೆಯೋಣ ಅನಿಸ್ತು ಅದಕ್ಕಾಗಿಯೆ ಈ ಲೇಖನ.

ಅಯ್ಯೋ ಪುರಾಣ ಇನ್ನು ಮುಗಿದಿಲ್ಲ
ಈಗ ಉಪದೇಶದ ಸರದಿಯಿದೆ.! 😆

ಮುಂದಿನ ಬ್ಲಾಗ್'ನಲ್ಲಿ..................
ಭಾಗ 2  👈ಕ್ಲಿಕ್ ಮಾಡಿ