ಚಪ್ಪಲಿಯಂಗಡಿ ಮಾಲಿಕ ಮತ್ತು ಗ್ರಾಹಕ

ನಾನು ಒಂದು ಚಪ್ಪಲಿ ಅಂಗಡಿಗೆ ಹೋದಾಗ ಅಂಗಡಿಯಲ್ಲಿನ ವ್ಯಕ್ತಿ ಗ್ರಾಹಕನನ್ನು ಆತ್ಮೀಯವಾಗಿ ಆಹ್ವಾನಿಸಿದ. ಕೂರಲು ಹೇಳಿ, ವಿವಿಧ ರೀತಿಯ ಚಪ್ಪಲಿಗಳನ್ನು ತೋರಿಸತೊಡಗಿದ. ಪ್ರತಿಯೊಂದು ಚಪ್ಪಲಿಯನ್ನು ಆತನೇ ಸ್ವತಃ ಗ್ರಾಹಕನ ಕಾಲುಗಳಿಗೆ ತೊಡಿಸುತ್ತಿದ್ದ. ಆದರೆ ಗ್ರಾಹಕನಿಗೆ ಯಾಕೋ ಹೀಗೆ ಮಾಡುವುದು ಸರಿ ಅನಿಸಲಿಲ್ಲ. ನೀವು ಹೀಗೆ ನನ್ನ ಕಾಲುಗಳನ್ನು ಮುಟ್ಟಿ ಚಪ್ಪಲಿ ತೊಡಿಸುವುದು ನನಗೆ ತುಂಬಾ ಮುಜುಗರವೆನಿಸುತ್ತಿದೆ, ನಾನೇ ಚಪ್ಪಲಿ ಹಾಕಿಕೊಳ್ಳುತ್ತೇನೆ ಅಂದ. ಅದಕ್ಕೆ ಆತ ‘ಪರವಾಗಿಲ್ಲ ಬಿಡಿ ಸರ್! ನಿಮಗೆ ಇಷ್ಟವಾದ ಚಪ್ಪಲಿಯನ್ನು ಹಾಕಿಕೊಂಡು ನೋಡಿ. ನಿಮಗೆ ನಮ್ಮ ಅಂಗಡಿಯ ಚಪ್ಪಲಿ ಇಷ್ಟವಾದರೆ ಸಾಕು ಎಂದು ಹೇಳಿದ.

ನೀವೂ ಮನುಷ್ಯರೆ, ನಾವು ಮನುಷ್ಯರೇ. ನೀವು ಹೀಗೆ ನಮ್ಮ ಕಾಲು ಹಿಡಿದು ಚಪ್ಪಲಿ ತೊಡಿಸುತ್ತಿರುವುದು ನನ್ನ ಮನಸ್ಸಿಗೆ ನೋವಾಗುತ್ತಿದೆ ಎಂದು ಗ್ರಾಹಕ ಹೇಳಿದಾಗ ಈ ಅಂಗಡಿಯಲ್ಲಿ ಅದು ನನ್ನ ಕರ್ತವ್ಯ ಅಂಗಡಿಯ ಹೊರಗೆ ನೀವು ಕೋಟಿ ರೂಪಾಯಿ ಕೊಟ್ಟರೂ ನಿಮ್ಮ ಕಾಲು ಮುಟ್ಟುವುದಿಲ್ಲ, ಅಂಗಡಿಯಲ್ಲಿ ನೀವು ಒಂದು ರು. ಕೊಡದಿದ್ದರೂ ನಿಮ್ಮ ಕಾಲು ಮುಟ್ಟದೇ ಇರಲಾರೆ ಎಂದ.
ನಾವು ಮಾಡುವ ಕೆಲಸ ಚಪ್ಪಲಿ ಹಾಕುವುದಾದರೇನು ಅದು ನಮ್ಮ ವೃತ್ತಿಯಷ್ಟೇ. ಪ್ರಾಯಶಃ ಚಪ್ಪಲಿ ಇಷ್ಟವಾಗುವುದರ ಜತೆಗೆ ಅಂಗಡಿಯಾತ ನಡೆದುಕೊಂಡ ರೀತಿಗೆ ಗ್ರಾಹಕ ಇನ್ನೆಂದಿಗೂ ಅಲ್ಲಿಯೇ ಚಪ್ಪಲಿ ತೆಗೆದುಕೊಳ್ಳಬಹುದು. ಕೆಲಸ ಮಾಡುವುದೇ ಮುಖ್ಯವಲ್ಲ ಕೆಲಸ ಮಾಡುವಾಗ ನಮ್ಮ ನಡೆ ನುಡಿಗಳು ಹೇಗಿರುತ್ತವೆ ಎಂಬುದು ಬಹು ಮುಖ್ಯವಾಗುತ್ತದೆಯಲ್ವೆ.