ಒಬ್ಬ ರೈತನ ಬಳಿ ಆರು ನಾಯಿಮರಿಗಳಿದ್ದವು. ಆತ ಅದನ್ನು ಮಾರಾಟ ಮಾಡಬೇಕೆಂದು ನಿರ್ಧರಿಸಿದ. ಆ ಕುರಿತು ಜಾಹೀರಾತೊಂದನ್ನು ಬರೆದು ತನ್ನ ಮನೆಯ ಬಳಿ, ಹೊಲದ ಬಳಿ ತೂಗು ಹಾಕಿದ. ಅದನ್ನು ನೋಡಿದ ಸಣ್ಣ ಹುಡುಗನೊಬ್ಬ ರೈತನ ಮನೆ ಹುಡುಕಿಕೊಂಡು ಬಂದ. ‘ಅಂಕಲ್, ನನಗೆ ಒಂದು ನಾಯಿಮರಿ ಬೇಕು’ ಎಂದು ಕೇಳಿಕೊಂಡ. ‘ಸರಿ, ಆದರೆ ನಾನು ನಾಯಿಮರಿಗಳನ್ನು ಪುಕ್ಕಟೆಯಾಗಿ ಕೊಡುವುದಿಲ್ಲ’ ಎಂದು ಹೇಳಿದ ರೈತ. ಹುಡುಗನ ಮುಖ ಸ್ವಲ್ಪ ಸಪ್ಪೆಯಾಯಿತು. ಆತ ತನ್ನ ಕಿಸೆಯಿಂದ ಒಂದಷ್ಟು ನಾಣ್ಯ ಹಾಗೂ ನೋಟುಗಳನ್ನು ಹೊರ ತೆಗೆದು ‘ನೋಡಿ ನನ್ನ ಹತ್ತಿರ ಇಷ್ಟಿದೆ. ನಾನೀಗ ಮರಿಗಳನ್ನು ನೋಡಬಹುದೆ?’ ಎಂದು ಕೇಳಿದ.
ರೈತನಿಗೆ ಪಾಪ ಅನಿಸಿತು. ‘ಸರಿ ಎಷ್ಟಿದೆಯೋ ಅಷ್ಟು ಹಣ ಕೊಟ್ಟರೆ ಸಾಕು’ ಎಂದು ಒಪ್ಪಿಕೊಂಡ. ಆ ಹುಡುಗನನ್ನು ನಾಯಿಮನೆಯತ್ತ ಕರೆದೊಯ್ದು ಶಿಳ್ಳೆ ಹಾಕಿ ನಾಯಿಮರಿಗಳನ್ನು ಕರೆದ.
ಮುದ್ದುಮುದ್ದಾದ ಮರಿಗಳು ಒಂದರ ಹಿಂದೆ ಒಂದು ಓಡಿಕೊಂಡು ಬಂದವು.. ಅವುಗಳನ್ನು ನೋಡಿ ಹುಡುಗನ ಮುಖವರಳಿತು. ಎಲ್ಲ ಮರಿಗಳನ್ನು ಒಮ್ಮೆ ನೋಡಿದ. ಅವನಿಗೆ ನಾಯಿಮನೆಯಲ್ಲಿ ಇನ್ನೂ ಒಂದು ಮರಿ ಇದೆಯೆಂದು ಗೊತ್ತಾಯಿತು. ಆತ ಬಗ್ಗೆ ನೋಡಿದ. ಅಲ್ಲೊಂದು ಸಣಕಲು ನಾಯಿಮರಿ ಮುದುರಿ ಕುಳಿತಿತ್ತು. ‘ಅಂಕಲ್ ನನಗೆ ಆ ನಾಯಿಮರಿ ಬೇಕು’ ಎಂದ..
ಅದಕ್ಕೆ ರೈತ ಹೇಳಿದ -‘ಮಗೂ ಆ ನಾಯಿಮರಿ ಬೇಡ. ಈ ಐದರಲ್ಲಿ ಯಾವುದಾದರೊಂದು ತೆಗೆದುಕೊಂಡು ಹೋಗು’. ‘ಇಲ್ಲ ಇಲ್ಲ, ನನಗೆ ಅದೇ ನಾಯಿಮರಿ ಬೇಕು’ ಎಂದು ಹೇಳಿದ ಹುಡುಗ. ‘ಆ ಮರಿಗೆ ಮೂರೇ ಕಾಲುಗಳಿರುವುದು. ಅದು ಇತರೆ ಮರಿಗಳಂತೆ ಓಡಲಾರದು, ಜಿಗಿಯಲಾರದು, ನಿನ್ನ ಜತೆ ಆಟವಾಡಲಾರದು. ಮತ್ತೇಕೆ ಆ ನಾಯಿಯೇ ಬೇಕೆಂದು ಹಠ ಮಾಡುತ್ತೀಯ?’
ಆಗ ಆ ಹುಡುಗ ನಿಧಾನವಾಗಿ ಬಗ್ಗಿ ಪ್ಯಾಂಟನ್ನು ಮೇಲಕ್ಕೆತ್ತಿ, ತನಗೆ ಜೋಡಿಸಿರುವ ಕೃತಕ ಕಾಲನ್ನು ರೈತನಿಗೆ ತೋರಿಸಿದ! ಆ ಹುಡುಗನೂ ಹುಟ್ಟು ಅಂಗವೈಕಲ್ಯಕ್ಕೆ ತುತ್ತಾಗಿ, ಕೃತಕ ಕಾಲಿನ ಸಹಾಯದಿಂದ ನಡೆಯುವವನಾಗಿದ್ದ. ‘ಇಲ್ಲಿ ನೋಡಿ ಅಂಕಲ್, ನನಗೂ ಒಂದೇ ಕಾಲಿರುವುದು. ಆ ಮರಿಯಂತೆ ನಾನೂ ಜೋರಾಗಿ ಓಡಲಾರೆ, ಜಿಗಿಯಲಾರೆ. ಆ ಮರಿಯನ್ನು ನನಗಿಂತ ಬೇರೆ ಯಾರು ಅರ್ಥ ಮಾಡಿಕೊಳ್ಳುತ್ತಾರೆ? ನನ್ನನ್ನು ಆ ಮರಿಗಿಂತ ಬೇರೆ ಯಾರೂ ಅರ್ಥೈಸಿಕೊಳ್ಳುತ್ತಾರೆ ಹೇಳಿ? ಅದನ್ನು ನನಗೇ ಕೊಡಿ ಪ್ಲೀಸ್’ ಎಂದ. ರೈತ ಆ ಪುಟ್ಟ ಹುಡುಗನನ್ನು ಬಾಚಿ ತಬ್ಬಿಕೊಂಡ.
ಜಗತ್ತಿನಲ್ಲಿ ಆ ಪುಟ್ಟ ಮರಿಯಂತೆಯೇ ಅನೇಕರಿದ್ದಾರೆ. ಬೇರೆಯವರ ಕಣ್ಣಿಗೆ ಅವರು ಓಡಲಾರದವರು, ಕುಣಿಯಲಾರದವರು, ಏನನ್ನೂ ಸಾಧಿಸಲಾರದವರು. ಆದರೆ ಆ ಹುಡುಗನಂಥ ಅಂತಃಕರಣ ಹೊಂದಿರುವ ಹೃದಯವಂತರಿಗೆ ಮಾತ್ರ ಅವರ ಕಷ್ಟ ಅರ್ಥವಾಗುತ್ತದೆ. ಇನ್ನೊಬ್ಬರ ಪರಿಸ್ಥಿತಿ ಅರ್ಥವಾಗಲು ಕೇವಲ ಕಣ್ಣುಗಳಿದ್ದರೆ ಸಾಲದು, ಒಳಗಣ್ಣೂ ತೆರೆದಿರಬೇಕು.
ಇದು ಕಟ್ಟುಕಥೆಯಾದರು ಭಾವಪ್ರಧಾನವಾಗಿದೆ
