ಗಿರ್ಮಿಟ್/Girmit ನಮ್ಮಕಡೆ ಭಾಳ ಫೇಮಸ್ಸು

ಗಿರ್ಮಿಟ್ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ..
ಉತ್ತರ ಕರ್ನಾಟಕದ ಜನತೆಗೆ ಈ ತಿನಿಸೆಂದರೆ ಪಂಚಪ್ರಾಣ.
ಹುಬ್ಬಳ್ಳಿ ಧಾರವಾಡ ಬಂತೆಂದರೆ ಬಸ್ಟಾಂಡ್ ಬದಿಯಲ್ಲಿ ಸಾಲುಸಾಲಾಗಿ ಕಾಣಸಿಗುತ್ತವೆ.
 ಗಿರ್ಮಿಟ್ ಎನ್ನುವುದು ಉತ್ತರ ಕರ್ನಾಟಕದ ಒಂದು ಸ್ಪೆಷಲ್ ತಿಂಡಿ ಅಥವಾ ಚಾಟ್ಸ್. ತಯಾರಿಕಾ ವಿಧಾನ ಭೇಲ್ ಪುರಿಯಂತೆ ತೋರಿದರೂ ಇದಕ್ಕೆ ಬಳಸುವ ಸಾಮಗ್ರಿಗಳೇ ಬೇರೆ. ಹುರಿಗಡಲೆ ಅಥವಾ ಪುಟಾಣಿಯ ಪುಡಿಯನ್ನು ಇದಕ್ಕೆ ಸೇರಿಸುವುದರಿಂದ ಒಂದು ವಿಶೇಷ ರುಚಿ ಬರುತ್ತದೆ. ನಾವು ಊರಿಗೆ ಹೋಗುವಾಗ ಅಪರೂಪಕ್ಕೆ ಒಮ್ಮೆ ಟ್ರೈನ್ ನಲ್ಲಿ ಪ್ರಯಾಣಿಸುತ್ತೇವೆ. ಟ್ರೈನ್ ನಲ್ಲಿ ಇಂಥ ಗಿರ್ಮಿಟ್ ಅಥವಾ ಚುರುಮುರಿಯನ್ನು ಮಾರಲು ಬರುತ್ತಾರೆ. ನಮಗಂತೂ ಪ್ರಯಾಣದ ವೇಳೆ ಈ ಗಿರ್ಮಿಟ್ ಸವಿಯುವುದೆಂದರೆ ಬಹಳ ಇಷ್ಟ! ಸಾಯಂಕಾಲದ ಹೊತ್ತಿಗೆ ಟೀಯೊಡನೆ ಈ ತಿಂಡಿ ಬಹಳ ಚೆನ್ನಾಗಿರುತ್ತದೆ.

ಮಾಡುವ ವಿಧಾನ:

ಈರುಳ್ಳಿಯನ್ನು ಸ್ವಲ್ಪ ತೆಳ್ಳಗೆ ಹೆಚ್ಚಿಕೊಳ್ಳಿ. ಕಡ್ಲೆಪುರಿಯನ್ನು ಬಾಣಲೆಯಲ್ಲಿ 4 - 5 ನಿಮಿಷ ಬಿಸಿಮಾಡಿ ಗರಿಗರಿಯಾಗಿ ಮಾಡಿಕೊಳ್ಳಿ.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಕಡಲೇಕಾಯಿ, ಸಾಸಿವೆ, ಜೀರಿಗೆ, ಅರಿಶಿನ, ಕರಿಬೇವು, ಹಸಿಮೆಣಸಿನ ಪೇಸ್ಟ್ ಹಾಕಿ ಒಗ್ಗರಣೆ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಎರಡು ನಿಮಿಷ ಬಾಡಿಸಿ ಉರಿಯನ್ನು ಆಫ್ ಮಾಡಿ.
ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ಹಿಡಿಸುವಷ್ಟು ಕಡಲೆಪುರಿ ಸೇರಿಸಿ ಕೈಯಲ್ಲಿ ಕಲಸಿ. ರುಚಿ ನೋಡಿಕೊಂಡು ಉಪ್ಪು ಅಥವಾ ಹುಳಿ ಬೇಕಿದ್ದರೆ ಸೇರಿಸಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಹುರಿಗಡಲೆ ಪುಡಿ ಸೇರಿಸಿ ಚೆನ್ನಾಗಿ ಕೈಯಾಡಿಸಿ ಸರ್ವಿಂಗ್ ಬೌಲ್ ಗೆ ಹಾಕಿಕೊಡಿ.
ಇರುಳ್ಳಿ ಸಣ್ಣಗೆ ಕತ್ತರಿಸಿ ಅರ್ಧ ಬೇಯಿಸಿದ ಹಸಿಮೆಣಸಿನಕಾಯಿಯೊಂದಿಗೆ ಸವಿದರೆ ಒಳ್ಳೆಯದು.